Prashanth Neel: ಪ್ರಶಾಂತ್ ನೀಲ್ ಕಳೆದ ಕೆಲವು ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ಮೂರು-ನಾಲ್ಕು ವರ್ಷವೂ ಅವರು ಅಲ್ಲಿಯೇ ಇರಲಿದ್ದಾರೆ. ಇದೀಗ ಬಂದಿರುವ ಸುದ್ದಿಯೆಂದರೆ ಮತ್ತೊಬ್ಬ ತೆಲುಗು ಸ್ಟಾರ್ ಜೊತೆ ಸಿನಿಮಾ ಮಾಡಲಿದ್ದಾರಂತೆ ನೀಲ್.
ಪ್ರಭಾಸ್ರ (Prabhas) ವೃತ್ತಿ ಬದುಕಿನ ಅತಿದೊಡ್ಡ ಹಿಟ್ ನೀಡಿದ್ದು ನಿರ್ದೇಶಕ ಎಸ್ಎಸ್ ರಾಜಮೌಳಿ, ‘ಬಾಹುಬಲಿ’ ಸಿನಿಮಾದ ಬಳಿಕ ಗೆಲುವನ್ನೇ ಕಾಣದಿದ್ದ ನಟ ಪ್ರಭಾಸ್ಗೆ ಕೊನೆಗೂ ಗೆಲುವು ತಂದುಕೊಟ್ಟಿರುವುದು ನಿರ್ದೇಶಕ ಪ್ರಶಾಂತ್ ನೀಲ್. ತಾವು ನಿರ್ದೇಶಿಸಿದ ನಾಲ್ಕು ಸಿನಿಮಾಗಳಲ್ಲಿ ಮೂರನ್ನು ಬ್ಲಾಕ್ ಬಸ್ಟರ್ ಹಿಟ್ ಮಾಡಿದ್ದಾರೆ ನೀಲ್. ಇದೇ ಕಾರಣಕ್ಕೆ ನೀಲ್ಗೆ ಎಲ್ಲ ಚಿತ್ರರಂಗಗಳಲ್ಲಿಯೂ ಬೇಡಿಕೆ ಹೆಚ್ಚಾಗಿದೆ. ರಾಜಮೌಳಿ ರೀತಿಯೇ ಪ್ರಶಾಂತ್ ನೀಲ್ ಜೊತೆಗೆ ನಟಿಸಲು ಸ್ಟಾರ್ ನಟರು ಸಾಳು ಗಟ್ಟಿ ನಿಲ್ಲುತ್ತಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶಿಸಿರುವ ‘ಸಲಾರ್’ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಎರಡೇ ದಿನಕ್ಕೆ 250 ಕೋಟಿಗೂ ಹೆಚ್ಚು ಮೊತ್ತವನ್ನು ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗಳಿಕೆ ಮಾಡಿದೆ. ‘ಸಲಾರ್’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ಪ್ರಶಾಂತ್ ನೀಲ್, ತಾವು ತೆಲುಗಿನ ಮತ್ತೊಬ್ಬ ಸ್ಟಾರ್ ನಟ ಜೂ ಎನ್ಟಿಆರ್ ಜೊತೆ ಸಿನಿಮಾ ಮಾಡಲಿರುವುದಾಗಿ ಘೋಷಿಸಿದರು. ಆ ಸಿನಿಮಾದ ಪೋಸ್ಟರ್ ಸಹ ಬಿಡುಗಡೆ ಆಗಿದೆ. ಇದೀಗ ಹೊರಬಂದಿರುವ ಸುದ್ದಿಯೆಂದರೆ ನೀಲ್, ತೆಲುಗಿನ ಮತ್ತೊಬ್ಬ ಸ್ಟಾರ್ ನಟನ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.
ಪ್ರಶಾಂತ್ ನೀಲ್ಗೆ ಈಗಾಗಲೇ ಎರಡು ತೆಲುಗು ಸಿನಿಮಾಗಳು ಕೈಯ್ಯಲ್ಲಿವೆ. ಪ್ರಭಾಸ್ ನಟನೆಯ ‘ಸಲಾರ್ 2’ ಅದಾದ ಬಳಿಕ ಜೂ ಎನ್ಟಿಆರ್ ನಟಿಸಲಿರುವ ಸಿನಿಮಾ. ಇವುಗಳ ನಡುವೆ ಮತ್ತೊಂದು ಸಿನಿಮಾವನ್ನು ನೀಲ್ ನಿರ್ದೇಶನ ಮಾಡಲಿದ್ದಾರೆ. ತೆಲುಗಿನ ಸ್ಟಾರ್ ನಟ ರಾಮ್ ಚರಣ್ ಅವರಿಗಾಗಿ ನೀಲ್ ಹೊಸದೊಂದು ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
‘ಕೆಜಿಎಫ್ 2’ ಸಿನಿಮಾ ಹಿಟ್ ಆದಾಗಲೇ ಪ್ರಶಾಂತ್ ನೀಲ್, ಚಿರಂಜೀವಿ ನಿವಾಸಕ್ಕೆ ತೆರಳಿ ಮೆಗಾಸ್ಟಾರ್ ಚಿರು ಹಾಗೂ ರಾಮ್ ಚರಣ್ ಅವರನ್ನು ಭೇಟಿಯಾಗಿದ್ದರು. ಆ ಭೇಟಿಯ ಬಗ್ಗೆ ಮಾಧ್ಯಗಳ ಬಳಿ ಮಾತನಾಡಿದ್ದ ಪ್ರಶಾಂತ್ ನೀಲ್, ಇದೊಂದು ಔಪಚಾರಿಕ ಭೇಟಿಯಷ್ಟೆ, ಸಿನಿಮಾ ಬಗ್ಗೆ ಚರ್ಚಿಸಿಲ್ಲ ಎಂದಿದ್ದರು. ಆದರೆ ಈಗ ಪ್ರಶಾಂತ್ ನೀಲ್, ರಾಮ್ ಚರಣ್ಗಾಗಿ ಸಿನಿಮಾ ಮಾಡುತ್ತಾರೆಂಬ ಸುದ್ದಿ ಗಟ್ಟಿಯಾಗಿ ಹರಿದಾಡುತ್ತಿದೆ.
‘ಸಲಾರ್’ ಮುಗಿಸಿರುವ ಪ್ರಶಾಂತ್ ನೀಲ್, ‘ಸಲಾರ್ 2’ ಸಿನಿಮಾವನ್ನು ಕೆಲವು ತಿಂಗಳಲ್ಲಿಯೇ ಪ್ರಾರಂಭ ಮಾಡಲಿದ್ದಾರೆ. ಅದಾದ ಬಳಿಕ ಜೂ ಎನ್ಟಿಆರ್ ಜೊತೆಗಿನ ಸಿನಿಮಾದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇವೆರಡೂ ಮುಗಿದ ಬಳಿಕವಷ್ಟೆ ರಾಮ್ ಚರಣ್ಗಾಗಿ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ನೀಲ್. ರಾಮ್ ಚರಣ್ ಪ್ರಸ್ತುತ ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಬಳಿಕ ಒಂದು ಹಿಂದಿ ಸಿನಿಮಾದಲ್ಲಿ ನಟಿಸಲಿದ್ದಾರೆ.