Sunday, December 22, 2024
HomeBlogYear Ender 2023: ವರ್ಷದ ಕೊನೆಯಲ್ಲಿ ಹೂಡಿಕೆ ತಪ್ಪುಗಳ ಮೆಲುಕು; ಈ ನಾಲ್ಕು ಅಂಶ, ಹುಷಾರ್

Year Ender 2023: ವರ್ಷದ ಕೊನೆಯಲ್ಲಿ ಹೂಡಿಕೆ ತಪ್ಪುಗಳ ಮೆಲುಕು; ಈ ನಾಲ್ಕು ಅಂಶ, ಹುಷಾರ್

Wrong Investment Ideas: ವ್ಯವಸ್ಥಿತವಾಗಿ ಹೂಡಿಕೆ ಮಾಡಿ ಬೇಗನೇ ನಿವೃತ್ತರಾಗಿ ಎನ್ನುವ ಫೈರ್ ಸಲಹೆಗಳನ್ನು ಅನುಸರಿಸಲು ಹೋದರೆ ಎಕ್ಸಿಟ್ ಆಗಬೇಕಾಗುತ್ತದೆ. ಈಕ್ವಿಟಿ ಅಲ್ಲದ ಹೂಡಿಕೆಗಳು ನಿರರ್ಥಕ. ಚಿನ್ನ, ರಿಯಲ್ ಎಸ್ಟೇಟ್​ನಿಂದ ಲಾಭ ಇಲ್ಲ ಎನ್ನುವ ವಾದ ಒಪ್ಪದಿರಿ. ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್ ಫಂಡ್​ಗಳ ಮೇಲೆ ಹೂಡಿಕೆ ಮಾಡುವುದು ಬೆಸ್ಟ್ ಎನ್ನುವ ಅಭಿಪ್ರಾಯವೂ ತಪ್ಪು.

ಡಿಸೆಂಬರ್ ಮುಗಿಯುತ್ತಾ ಬಂತು, ಹೊಸ ವರ್ಷ, ಹೊಸ ಉಲ್ಲಾಸ, ಸಂಭ್ರಮ ಪಡುವ ಸಮಯ. ಸಾಕಷ್ಟು ಜನರು ಹಣಕಾಸು ಸ್ವಾತಂತ್ರ್ಯಕ್ಕೆ ಹೊಸ ವರ್ಷದ ಹೊಸ ಸಂಕಲ್ಪ ತೊಡಬಹುದು. ಸೋಷಿಯಲ್ ಮೀಡಿಯಾದಲ್ಲಿ ತಜ್ಞಾತಿತಜ್ಞರಿಂದ ಹಣಕಾಸು ಸಲಹೆಗಳ (financial ideas) ಮಹಾಪೂರವೇ ಹರಿದುಬರುತ್ತದೆ. ಥರಹೇವಾರಿ ಥಿಯರಿಗಳು ವೈರಲ್ ಆಗುತ್ತವೆ. ಅಲ್ಲಿ ಹೂಡಿಕೆ ಮಾಡಿ, ಹೀಗೆ ಹೂಡಿಕೆ ಮಾಡಿ, ಆ ಸೂತ್ರ ಅನುಸರಿಸಿ, ಈ ಸೂತ್ರ ಅನುಸರಿಸಿ ಎಂಬೆಲ್ಲಾ ಸಲಹೆಗಳನ್ನು ನಾವು ಸಾಮಾಜಿಕ ಜಾಲತಾಣಗಳ ಸಾಗರದಲ್ಲಿ ಕಾಣಬಹುದು. ಜನರು 2023ರಲ್ಲಿ ಹೂಡಿಕೆ ವಿಚಾರದಲ್ಲಿ ಎಡವಿದ್ದು ಎಲ್ಲಿ, ಪಾಠ ಕಲಿಯಬೇಕಿರುವುದು ಏನು ಎಂದು ಈಕ್ವಿಟಿ ಮಾಸ್ಟರ್ ಸಂಸ್ಥೆಯ ಮಾಜಿ ಸಿಇಒ ರಾಜೀವ್ ಗೋಯಲ್ ಅವರು ನಾಲ್ಕು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

ಬೇಗ ನಿವೃತ್ತರಾಗಲು ಫೈರ್ ಬೇಕೆ?

ಈಗೀಗ FIRE ಎಂಬ ಪದ ಫೈನಾನ್ಷಿಯಲ್ ಇನ್​ಫ್ಲುಯೆನ್ಸರ್​ಗಳ ಬಾಯಲ್ಲಿ ಹೆಚ್ಚೆಚ್ಚು ಕೇಳಿಬರುತ್ತಿದೆ. ಫೈರ್ ಎಂದರೆ ಫೈನಾನ್ಷಿಯಲ್ ಇಂಡಿಪೆಂಡೆನ್ಸ್, ರಿಟೈರ್ ಅರ್ಲಿ. ಅಂದರೆ ಹಣಕಾಸು ಸ್ವಾತಂತ್ರ್ಯ ಪಡೆದು ಬೇಗ ನಿವೃತ್ತರಾಗಿ ಎಂದರ್ಥ. ಕೆಲ ವರ್ಷ ಚೆನ್ನಾಗಿ ದುಡಿ ಹಣವನ್ನು ವ್ಯವಸ್ಥಿತವಾಗಿ ಹೂಡಿಕೆ ಮಾಡಿದರೆ, ಅದರಿಂದ ಬರುವ ರಿಟರ್ನ್ಸ್​ನಲ್ಲಿ ಜೀವನ ಮಾಡಬಹುದು. ಕೆಲಸ ಮಾಡುವ ಅವಶ್ಯಕತೆ ಇರುವುದಿಲ್ಲ ಎಂಬುದು ಫೈರ್ ತತ್ವ. ಆದರೆ, ಷೇರು ಮಾರುಕಟ್ಟೆಯಲ್ಲಿ ನೀವು ಮಾಡುವ ಹೂಡಿಕೆ ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಲಾಭದಾಯಕ ರಿಟರ್ನ್ ನೀಡುತ್ತೆ ಎಂದು ಭಾವಿಸುವುದು ಕೇವಲ ಭ್ರಮೆ ಮಾತ್ರವೆ. ಇದು ಚೆನ್ನಾಗಿ ನೆನಪಿರಲಿ. ಷೇರುಮಾರುಕಟ್ಟೆಯಿಂದ ಲಾಭ ಬರುತ್ತದಾದರೂ ಅದನ್ನು ಜನರಲೈಸ್ ಮಾಡಿದರೆ ಅದಕ್ಕಿಂತ ದೊಡ್ಡ ಪ್ರಮಾದ ಇನ್ನೊಂದಿಲ್ಲ.

ಸ್ಮಾಲ್ ಕ್ಯಾಪ್ ಫಂಡ್​ಗಳು ಚಿನ್ನದ ಮೊಟ್ಟೆ ಎಂಬ ಭ್ರಮೆ…

2023ರಲ್ಲಿ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಫಂಡ್​ಗಳು ಲಾರ್ಜ್ ಕ್ಯಾಪ್ ಫಂಡ್​ಗಳಿಗಿಂತ ಉತ್ತಮ ಲಾಭ ಮಾಡಿವೆ. ಆದರೆ, ಮುಂದೆಯೂ ಇವು ಹೀಗೇ ಭರ್ಜರಿಯಾಗಿ ಬೆಳೆಯುತ್ತವೆ ಎಂದು ಭಾವಿಸುವುದು ಭ್ರಮೆಯೇ. ಷೇರು ಮಾರುಕಟ್ಟೆ ಈ ವರ್ಷ ಉತ್ತುಂಗಕ್ಕೆ ಏರಿದೆ. ಆದರೆ, ಷೇರುಪೇಟೆಯ ಈ ಬೆಳವಣಿಗೆ ಒಂದು ರೀತಿಯಲ್ಲಿ ಚಕ್ರದಂತೆ. ಉತ್ತಂಗಕ್ಕೆ ಏರಿದ್ದು ಮತ್ತೆ ಕೆಳಗಿಳಿಯುತ್ತದೆ. ಎಷ್ಟು ಕೆಳಗಿಳಿಯುತ್ತದೆ, ಅದಾದ ಬಳಿಕ ಮತ್ತೆ ಎಷ್ಟು ಜಿಗಿಯುತ್ತದೆ ಅದು ಷೇರುಪೇಟೆಯ ಭವಿಷ್ಯದ ಬೆಳವಣಿಗೆ ದಿಕ್ಕನ್ನು ತೋರಿಸುತ್ತದೆ. ಈ ಮಧ್ಯೆ ಲಾರ್ಜ್ ಕ್ಯಾಪ್ ಫಂಡ್​ಗಳು ಹೆಚ್ಚು ರಿಟರ್ನ್ ಕೊಡುವುದಿಲ್ಲ ಎಂದು ಅದರಲ್ಲಿ ಹೂಡಿಕೆ ಮಾಡದೇ ಇರುವ ನಿರ್ಧಾರ ತಪ್ಪಾಗುತ್ತದೆ.

ಎಸ್​ಐಪಿಯೇ ಪರಮಸತ್ಯವಲ್ಲ…

ಮ್ಯುಚುವಲ್ ಫಂಡ್ ಎಸ್​ಐಪಿಯ ಟ್ರೆಂಡ್ ಚಾಲನೆಯಲ್ಲಿದೆ. ದೀರ್ಘಾವಧಿ ಕಾಲ ಎಸ್​ಐಪಿಯಲ್ಲಿ ಹೂಡಿಕೆ ಮಾಡಿದರೆ ಅಷ್ಟು ಭರ್ಜರಿ ಲಾಭ ಸಿಗುತ್ತದೆ ಎನ್ನುವಂತಹ ಸುದ್ದಿಗಳನ್ನು ಓದಿರುತ್ತೇವೆ. ಆದರೆ, ನಿರ್ದಿಷ್ಟ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಲಾಭ ಗಳಿಕೆ ಆದರೆ ಮಾತ್ರವೇ ಅದು ವರ್ಕೌಟ್ ಆಗುವುದು. ಎಸ್​ಐಪಿ ಎಷ್ಟು ರಿಟರ್ನ್ ತರುತ್ತದೆ ಎನ್ನುವುದು ಆ ಮ್ಯುಚುವಲ್ ಫಂಡ್ ಯಾವುದರಲ್ಲಿ ಹೂಡಿಕೆ ಮಾಡಿದೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಕೆಲ ಎಸ್​ಐಪಿಗಳು ಇರುವ ಹೂಡಿಕೆಗೆ ನಷ್ಟವನ್ನೇ ತರಬಹುದು. ಆದ್ದರಿಂದ ಎಸ್​ಐಪಿಗೆ ಹೂಡಿಕೆ ಮಾಡುವ ಮುನ್ನ ಮ್ಯುಚುವಲ್ ಫಂಡ್ ಸರಿಯಾದ ದಿಕ್ಕಿನಲ್ಲಿ ಇದೆಯಾ ಎಂದು ಜಾಗ್ರತೆ ವಹಿಸಬೇಕು.

ಚಿನ್ನ, ರಿಯಲ್ ಎಸ್ಟೇಟ್ ಎಲ್ಲಾ ವೇಸ್ಟ್ ಎನ್ನುವ ಭ್ರಮೆ…

ಈಗೀಗ ಬಹಳಷ್ಟು ತಜ್ಞರು ಷೇರುಮಾರುಕಟ್ಟೆ ಬಗ್ಗೆ ವ್ಯಾಮೋಹ ಬೆಳೆಸಿಕೊಂಡಿದ್ದಾರೆ. ಈಕ್ವಿಟಿಗೆ ಅಲ್ಲದ ಹೂಡಿಕೆಗಳು ವೇಸ್ಟ್ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಚಿನ್ನ, ರಿಯಲ್ ಎಸ್ಟೇಟ್ ಇತ್ಯಾದಿ ಸಾಂಪ್ರದಾಯಿಕ ಹೂಡಿಕೆಗಳಿಂದ ರಿಟರ್ನ್ ಸಿಗುವುದು ಅತ್ಯಲ್ಪ. ಈಕ್ವಿಟಿಗೆ ಹೋಲಿಸಿದರೆ ಇವು ತೃಣಕ್ಕೆ ಸಮಾನ ಎನ್ನುವ ರೀತಿಯಲ್ಲಿ ತಜ್ಞರು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಚಿನ್ನ ಮತ್ತು ರಿಯಲ್ ಎಸ್ಟೇಟ್ ಯಾವತ್ತಿದ್ದರೂ ನಮ್ಮ ಹೂಡಿಕೆಯನ್ನು ಸುಭದ್ರಗೊಳಿಸುವಂಥವು.

ಇಷ್ಟೆಲ್ಲಾ ಹೇಳಿದ ಬಳಿಕ 2024ಕ್ಕೆ ಒಂದು ಸಲಹೆ ಎಂದರೆ, ನಿಮ್ಮ ಹೂಡಿಕೆ ವೈವಿಧ್ಯತೆಯಿಂದ ಕೂಡಿರಲಿ ಎಂಬುದು. ಈಕ್ವಿಟಿ, ಡೆಟ್, ಚಿನ್ನ, ರಿಯಲ್ ಎಸ್ಟೇಟ್ ಹೀಗೆ ವ್ಯಾಪಿಸಿರಲಿ. ಈಕ್ವಿಟಿಯಲ್ಲೂ ಕೂಡ ಲಾರ್ಜ್ ಕ್ಯಾಪ್, ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್ ಹೀಗೆ ಅಲ್ಲೂ ವೈವಿಧ್ಯತೆ ಇರಲಿ. ಈ ರೀತಿ ಹೂಡಿಕೆ ವಿಸ್ತರಣೆ ಆದರೆ ನಿಮ್ಮ ಹಣ ಹೆಚ್ಚು ಸುರಕ್ಷಿತವಾಗಿರಬಹುದು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments